Menu

ಕೀರ್ತನೆಗಳು 77

OKCV

1 ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ. ಹೌದು, ನನ್ನ ಸ್ವರದಿಂದ ದೇವರ ಕಡೆಗೆ ಕೂಗುತ್ತೇನೆ, ನನಗೆ ದೇವರು ಕಿವಿಗೊಡುವರು. 2 ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ. 3 ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿಸುವುದರಿಂದ ನನ್ನ ಆತ್ಮವು ಬಳಲಿ ಹೋಯಿತು. 4 ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು. 5 ಪೂರ್ವದ ದಿವಸಗಳನ್ನೂ ಆದಿಕಾಲದ ವರ್ಷಗಳನ್ನೂ ಯೋಚಿಸಿದೆ. 6 ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು. ನನ್ನ ಹೃದಯದಲ್ಲಿ ನಾನು ಧ್ಯಾನ ಮಾಡಿದೆ. ನನ್ನ ಆತ್ಮದಲ್ಲಿ ಪ್ರಶ್ನೆ ಹೀಗೆ ಮೂಡುತ್ತಿತ್ತು: 7 “ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ? ಇನ್ನೆಂದಿಗೂ ದಯೆತೋರದೆ ಇರುವರೋ? 8 ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ? 9 ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?" 10 ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು. 11 ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು. 12 ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿಮ್ಮ ಕೃತ್ಯಗಳನ್ನು ಯೋಚಿಸುವೆನು." 13 ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು? 14 ಅದ್ಭುತಗಳನ್ನು ಮಾಡುವ ದೇವರು ನೀವೇ. ಜನರಲ್ಲಿ ನಿಮ್ಮ ಬಲವನ್ನು ತಿಳಿಯಮಾಡಿದ್ದೀರಿ. 15 ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ ನಿಮ್ಮ ಜನರನ್ನು ನಿಮ್ಮ ಬಲವಾದ ತೋಳಿನಿಂದ ವಿಮೋಚಿಸಿದ್ದೀರಿ. 16 ಜಲರಾಶಿಗಳು ನಿಮ್ಮನ್ನು ಕಂಡವು. ದೇವರೇ, ಜಲರಾಶಿಗಳು ನಿಮ್ಮನ್ನು ಕಂಡು ಹೊರಳಾಡಿದವು. ಅಗಾಧ ಸಾಗರಗಳು ಅಲ್ಲಕಲ್ಲೋಲವಾದವು. 17 ಮೋಡಗಳು ನೀರನ್ನು ಸುರಿಸಿದವು. ಆಕಾಶಗಳು ಗುಡುಗಿನಿಂದ ಶಬ್ದಮಾಡಿದವು. ನಿಮ್ಮ ಬಾಣಗಳು ಹಿಂದೆಯೂ ಮುಂದೆಯೂ ಹಾರಿ ಬಂದವು. 18 ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು. ಮಿಂಚುಗಳು ಜಗತ್ತನ್ನು ಬೆಳಗಿಸಿದವು. ಭೂಮಿಯು ನಡುಗಿ ಕದಲಿತು. 19 ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ. 20 ಮೋಶೆ ಆರೋನರ ಕೈಯಿಂದ ನಿಮ್ಮ ಜನರನ್ನು ಮಂದೆಯ ಹಾಗೆ ನಡೆಸಿದಿರಿ.

Everything we make is available for free because of a generous community of supporters.

Donate