ಕೀರ್ತನೆಗಳು 53
OKCV1 “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋದವರು ಅವರ ಮಾರ್ಗಗಳು ಅಸಹ್ಯಕರ. ಅವರಲ್ಲಿ ಒಳ್ಳೆಯದನ್ನು ಮಾಡುವವರು ಒಬ್ಬರೂ ಇಲ್ಲ. 2 ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ದೇವರು ಸ್ವರ್ಗದಿಂದ ಮನುಷ್ಯರ ಮೇಲೆ ದೃಷ್ಟಿಸಿದರು. 3 ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ. ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದರು. 4 ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಅವರು ದೇವರನ್ನು ಸ್ಮರಿಸುವುದೇ ಇಲ್ಲ. 5 ಭಯವಿಲ್ಲದಿರುವಲ್ಲಿ ಅವರು ಭಯಭ್ರಾಂತರಾದರು; ಏಕೆಂದರೆ ನಿಮಗೆ ವಿರೋಧವಾಗಿ ದಂಡು ಇಳಿಸುವವರನ್ನು ದೇವರು ಚದರಿಸಿಬಿಟ್ಟಿದ್ದಾರೆ. ನೀವು ಅವರನ್ನು ನಾಚಿಕೆಪಡಿಸಿದ್ದೀರಿ. ಏಕೆಂದರೆ ದೇವರು ಅವರನ್ನು ತಿರಸ್ಕರಿಸಿದ್ದಾರೆ. 6 ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.
