Menu

ಯೋನನು 4

OKCV

1 ಆದರೆ ಯೋನನು ತುಂಬಾ ಬೇಸರಗೊಂಡನು. ಅವನಿಗೆ ಬಹು ಕೋಪ ಬಂತು. 2 ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ: “ಯೆಹೋವ ದೇವರೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನು ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು. ನೀವು ಕೃಪೆಯೂ ಅನುಕಂಪವೂ ಪ್ರೀತಿಯಲ್ಲಿ ಐಶ್ವರ್ಯವುಳ್ಳ ದೇವರೆಂದೂ ಕೇಡಿನ ವಿಷಯವಾಗಿ ಮನಮರುಗುವವರೆಂದೂ ನನಗೆ ತಿಳಿದಿತ್ತು. 3 ಆದ್ದರಿಂದ ಯೆಹೋವ ದೇವರೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆಯಿರಿ, ಏಕೆಂದರೆ ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು. 4 ಆದರೆ ಯೆಹೋವ ದೇವರು, “ನೀನು ಹೀಗೆ ಕೋಪ ಮಾಡಿಕೊಳ್ಳುವುದು ಸರಿಯೋ?” ಎಂದು ಯೋನನಿಗೆ ಹೇಳಿದರು. 5 ಆಗ ಯೋನನು ಪಟ್ಟಣವನ್ನು ಬಿಟ್ಟು, ಪಟ್ಟಣದ ಪೂರ್ವದಿಕ್ಕಿನ ಕಡೆಯಲ್ಲಿ ಕುಳಿತುಕೊಂಡು, ಗುಡಿಸಲನ್ನು ಕಟ್ಟಿಕೊಂಡು, ಪಟ್ಟಣದಲ್ಲಿ ಏನಾಗುವುದೆಂದು ನೋಡುವವರೆಗೆ ಗುಡಿಸಲಿನ ನೆರಳಿನಲ್ಲಿ ಕುಳಿತುಕೊಂಡನು. 6 ದೇವರಾದ ಯೆಹೋವ ದೇವರು ಒಂದು ಸೋರೆ ಬಳ್ಳಿಯನ್ನು ಹಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು, ಅವನ ತಲೆಗೆ ನೆರಳು ಕೊಟ್ಟು, ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದರು. ಯೋನನು ಆ ಸೋರೆ ಬಳ್ಳಿಯ ವಿಷಯವಾಗಿ ಬಹಳ ಸಂತೋಷಪಟ್ಟನು. 7 ಮಾರನೆಯ ದಿವಸ ಉದಯವಾದಾಗ, ದೇವರು ಒಂದು ಹುಳುವನ್ನು ಸಿದ್ಧಮಾಡಿದರು. ಅದು ಸೋರೆ ಬಳ್ಳಿಯನ್ನು ಒಣಗುವ ಹಾಗೆ ಹೊಡೆಯಿತು. 8 ಸೂರ್ಯೋದಯವಾದಾಗ ದೇವರು ಉಗ್ರವಾದ ಪೂರ್ವ ಗಾಳಿಯನ್ನು ಸಿದ್ಧಮಾಡಿದರು. ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ, ಅವನು ಮೂರ್ಛೆ ಹೋಗಿ, ಮರಣವನ್ನು ಕೇಳಿಕೊಂಡು, “ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು. 9 ಆದರೆ ದೇವರು ಯೋನನಿಗೆ, “ನೀನು ಸೋರೆ ಬಳ್ಳಿಯನ್ನು ಕುರಿತು ಕೋಪ ಮಾಡುವುದು ಸರಿಯೋ?” ಎಂದರು. ಅವನು, “ನಾನು ಸಾಯುವಷ್ಟು ಕೋಪ ಮಾಡುವುದು ಒಳ್ಳೆಯದೇ,” ಎಂದನು. 10 ಆದರೆ ಯೆಹೋವ ದೇವರು, “ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ, ಒಂದೇ ರಾತ್ರಿಯಲ್ಲಿ ನಾಶವಾದಂಥ ಸೋರೆ ಬಳ್ಳಿಗಾಗಿ ಚಿಂತಿಸಿದೆಯಲ್ಲಾ, 11 ಹಾಗಾದರೆ ಎಡಬಲ ಕೈಗಳನ್ನು ತಿಳಿಯದವರಾದ ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು ಬಹಳ ಪಶುಪ್ರಾಣಿಗಳೂ ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆಯನ್ನು ನಾನು ಚಿಂತಿಸಬಾರದೋ?” ಎಂದರು.

Everything we make is available for free because of a generous community of supporters.

Donate