Menu

ಕೀರ್ತನೆಗಳು 62

IRV

1 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. ನನ್ನ ರಕ್ಷಣೆಯು ಆತನಿಂದಲೇ. 2 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲಿದರೂ ಬೀಳೆನು. 3 ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು, ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ? 4 ಅವನನ್ನು ಉನ್ನತಸ್ಥಾನದಿಂದ ದೊಬ್ಬುವುದೇ ಅವರ ಆಲೋಚನೆ. ಸುಳ್ಳಾಡುವುದು ಅವರಿಗೆ ಅತಿಸಂತೋಷ; ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ 5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ. 6 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲುವುದಿಲ್ಲ. 7 ನನ್ನ ರಕ್ಷಣೆಗೂ, ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ, ಆಶ್ರಯವೂ ದೇವರಲ್ಲಿಯೇ. 8 ಜನರೇ, ಯಾವಾಗಲೂ ಆತನನ್ನೇ ನಂಬಿ, ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; ದೇವರು ನಮ್ಮ ಆಶ್ರಯವು. ಸೆಲಾ 9 ನರರು ಬರೀ ಉಸಿರೇ; ನರಾಧಿಪತಿಗಳು ಬರೀ ಮಾಯವೇ. ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಹಗುರ. 10 ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ; ಸುಲಿಗೆಯಿಂದ ಗಳಿಸಿ ಅಹಂಕಾರಪಡಬೇಡಿರಿ; ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ. 11 ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ. 12 ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

Everything we make is available for free because of a generous community of supporters.

Donate