Menu

ಕೀರ್ತನೆಗಳು 148

IRV

1 ಯೆಹೋವನಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ. 2 ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ, ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ. 3 ಸೂರ್ಯ ಮತ್ತು ಚಂದ್ರರೇ, ಆತನನ್ನು ಸ್ತುತಿಸಿರಿ, ಹೊಳೆಯುವ ಎಲ್ಲಾ ನಕ್ಷತ್ರಗಳೇ, ಆತನನ್ನು ಸ್ತುತಿಸಿರಿ. 4 ಉನ್ನತೋನ್ನತವಾದ ಆಕಾಶವೇ, ಅದರ ಮೇಲಿರುವ ಜಲರಾಶಿಗಳೇ, ಆತನನ್ನು ಸ್ತುತಿಸಿರಿ. 5 ಅವು ಯೆಹೋವನ ನಾಮವನ್ನು ಸ್ತುತಿಸಲಿ, ಆತನು ಅಪ್ಪಣೆಕೊಡಲು ಅವು ಉಂಟಾದವು. 6 ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ. 7 ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿಮಿಂಗಿಲಗಳು, ಆದಿಸಾಗರಗಳು 8 ಬೆಂಕಿ, ಕಲ್ಮಳೆ, ಹಿಮ, ಹಬೆ ಇವುಗಳು, ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು, 9 ಬೆಟ್ಟಗಳು, ಎಲ್ಲಾ ಗುಡ್ಡಗಳು, ಹಣ್ಣಿನ ಮರಗಳು, ಎಲ್ಲಾ ತುರಾಯಿ ಮರಗಳು, 10 ಎಲ್ಲಾ ಮೃಗ, ಪಶು, ಪಕ್ಷಿ, ಕ್ರಿಮಿಕೀಟಗಳು, 11 ಭೂರಾಜರು, ಎಲ್ಲಾ ಜನಾಂಗಗಳು, ಪ್ರಭುಗಳು, ಸರ್ವದೇಶಾಧಿಪತಿಗಳು, 12 ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು 13 ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು, ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ. 14 ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!

Everything we make is available for free because of a generous community of supporters.

Donate