ಕೀರ್ತನೆಗಳು 115
IRV1 ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯತೆಗಳ ನಿಮಿತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು. 2 “ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು? 3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ. 4 ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. 5 ಅವು ಬಾಯಿದ್ದರೂ ಮಾತನಾಡುವುದಿಲ್ಲ; ಕಣ್ಣಿದ್ದರೂ ನೋಡುವುದಿಲ್ಲ. 6 ಕಿವಿಯಿದ್ದರೂ ಕೇಳುವುದಿಲ್ಲ; ಮೂಗಿದ್ದರೂ ಮೂಸುವುದಿಲ್ಲ. 7 ಕೈಯುಂಟು ಮುಟ್ಟುವುದಿಲ್ಲ; ಕಾಲುಂಟು ನಡೆಯುವುದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ. 8 ಅವುಗಳನ್ನು ಮಾಡುವವರೂ, ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ. 9 ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ. 10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ. 11 ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ. 12 ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು. 13 ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು. 14 ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ; 15 ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ. 16 ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ. 17 ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ. 18 ನಾವೋ ಇಂದಿನಿಂದ ಸದಾಕಾಲವೂ ಯೆಹೋವನನ್ನು ಕೊಂಡಾಡುವೆವು. ಯೆಹೋವನಿಗೆ ಸ್ತೋತ್ರ!
