Menu

ಕೀರ್ತನೆಗಳು 108

IRV

1 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ನುಡಿಸುತ್ತಾ ಹಾಡುವೆನು; ನನ್ನ ಆತ್ಮವೇ, ಎಚ್ಚೆತ್ತುಕೋ! 2 ಸ್ವರಮಂಡಲವೇ, ಕಿನ್ನರಿಯೇ, ಎಚ್ಚರಗೊಳ್ಳಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು. 3 ಯೆಹೋವನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು. 4 ಏಕೆಂದರೆ ನಿನ್ನ ಕೃಪೆಯು ಆಕಾಶಕ್ಕಿಂತಲೂ ದೊಡ್ಡದಾಗಿದೆ, ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ. 5 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ. 6 ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು, ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು. 7 ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬಯಲನ್ನು ಅಳತೆಮಾಡಿ ಕೊಡುವೆನು. 8 ಗಿಲ್ಯಾದ್ ಸೀಮೆಯೂ, ಮನಸ್ಸೆಯ ದೇಶವೂ ನನ್ನವು. ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ. ನನ್ನ ರಾಜದಂಡವು ಯೆಹೂದ ಕುಲವೇ. 9 ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆ; ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯದ ವಿಷಯವಾಗಿ ಜಯಘೋಷ ಮಾಡುವೆನು. 10 ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು? 11 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ? 12 ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು. ಮನುಷ್ಯರ ಸಹಾಯವು ವ್ಯರ್ಥ. 13 ದೇವರಿಂದ ಶೂರಕೃತ್ಯಗಳನ್ನು ನಡೆಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

Everything we make is available for free because of a generous community of supporters.

Donate