Menu

ಕೀರ್ತನೆಗಳು 102

IRV

1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ. 2 ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು. 3 ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ. 4 ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು. 5 ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ. 6 ಅಡವಿಯ ಬಕಪಕ್ಷಿಯಂತಿದ್ದೇನೆ; ಹಾಳೂರಿನ ಗೂಬೆಯಂತಿದ್ದೇನೆ. 7 ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ. 8 ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ. 9 ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು. 10 ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ! 11 ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ. 12 ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು. 13 ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ. 14 ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ. 15 ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ, 16 ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ, 17 ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು. 18 ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ, 19 “ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ. 20 ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ, 21 ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ. 22 ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು. 23 ಆತನು ಯೌವನಪ್ರಾಯದಲ್ಲಿಯೇ ನನ್ನ ಬಲವನ್ನು ಕುಂದಿಸಿದ್ದಾನೆ; 24 ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ. 25 ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ. 26 ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು. 27 ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ. 28 ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.

Everything we make is available for free because of a generous community of supporters.

Donate